ಅವಳು ಯಾರಿರಬಹುದು?
ನೋಡಿದೆಯಾ ಅವಳನ್ನು? ಮುಂಜಾನೆ ತಬ್ಬಿದ ಮಂಜು ಹನಿಗಳ ಮಧ್ಯೆ ನಗುತ್ತಾ ಕುಳಿತಿರುವಳು. ಎಳೆ ಬಿಸಿಲುಗಳ ಕಿರಣಗಳು ತಟ್ಟಿದರೂ ಕರಗದ ಅವಳ ಆ ನಗು! ಅದಕ್ಕೆ ಸೋಲದವರೇ ಇಲ್ಲ.
ಪಾಚಿ ಕಟ್ಟಿದ ನೀರಲ್ಲೂ, ಹೂಧೂಳಿ ಹಾರುವ ಗಾಳಿಯಲ್ಲಿಯು ಅವಳಿರುವಳು. ಸುಗಂಧ ಬೀರುವ ಮಣ್ಣ ಬೇರಲ್ಲಿ, ಅಷ್ಟೇ ಏಕೆ? ನಭವನೇರ ಬಯಸುವ ಬೇಲಿ ಹೂವ ಬಳ್ಳಿಯಲ್ಲಿ ಕೂಡಾ ಅವಳದ್ದೇ ಪಾದದಚ್ಚು. ಅವಳಿಲ್ಲದಿದ್ದರೆ ಕೊರಡು ಕೊನರುವುದಿಲ್ಲ. ಬಕುಲದ ಹೂವುಗಳು ಬಿಡುವುದಿಲ್ಲ. ಋತು ಸಂವತ್ಸರಗಳು ಹುಟ್ಟುವುದೇ ಇಲ್ಲ. ನೆರಳು ಚೆಲ್ಲಿದ ಹಾದಿಗಳಲ್ಲಿ ಕೂಡಾ ಅವಳನ್ನು ನೀವು ನೋಡಬಹುದು. ತನಗರಿವಿಲ್ಲದಂತೆ ಅವಳು ಜಗದ ತುಂಬಾ ಚಿತ್ತಾರ ಮೂಡಿಸುತ್ತಿರುತ್ತಾಳೆ. ಮುಗಿಲು ತುಂಬ ಮುಗಿಯದ ಕವಿತೆಗಳನ್ನು ಬರೆಯುತ್ತಾಳೆ. ನೆಲವ ತಬ್ಬುವ ಆರ್ದ್ರ ಬಿಂದುಗಳಲ್ಲಿ ಅವಳು ಹಾಡುತ್ತಾಳೆ. ತುಂಬಿ ಹರಿಯುವ ಶರಧಿಯುಪ್ಪಿನಲ್ಲಿ,ಸಿಹಿ ನೀರ ಬುಗ್ಗೆಯಲ್ಲಿ ,ಕಣ್ಣು ಕುಕ್ಕುವ ಅಂಬಕಗಳ ಹೊಳಪಲ್ಲಿ ಹೀಗೆ ಭೂಮಿ , ಬಾನು, ಕಾಡು,ಹಾಡು ಗಳಲ್ಲಿ ಅವಳು ಎಂದೆಂದಿಗೂ ಚಿರಸ್ಥಾಯಿಯಾಗಿ ಬದುಕುತ್ತಾಳೆ. ಅವಳು ಯಾರಿರಬಹುದು ಗೊತ್ತಾಯಿತೇ?
Comments
Post a Comment