ಮಾಡಿದ್ದುಣ್ಣೋ... !
“ ನೀವು ಹೀಗೆ ಹೇಳಿದರೆ ನಾವು ನಾಳೆ ನಡೆಯುವುದು ಬೇಡವೇ ? ನಮ್ಮ ಮಕ್ಕಳು ಇಲ್ಲೇ ಶಾಲೆಗೇ ಹೋಗ್ತಾವೆ, ಅವು ಏನ್ ಮಾಡ್ಯಾವು” ಕುಸುಮನ ಗಂಡ ಶಶಿ ಹತ್ತಿರದ ಮನೆಯ ಶ್ರೀನಾಥನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ.ಶ್ರೀನಾಥನ ಮನೆಯ ಬದಿಯಿಂದ ಹೋಗುವ ಕಾಂಕ್ರೀಟು ಮಾರ್ಗಕ್ಕೆ ಸೇರುವ ಕಾಲುದಾರಿಯನ್ನು ಜೆಸಿಬಿ ತರಿಸಿ ಮುಚ್ಚುವ ಪ್ಲಾನ್(ಶ್ರೀನಾಥನ ಪ್ಲಾನ್) ಮಾಡಿ ತಿಂಗಳುಗಳಾಗಿದ್ದುವು.ಆದರೆ ಏನೋ ಅಡಚಣೆಗಳಿಂದ ಕೆಲಸ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಬರುವ ವಾರ ಜೆ ಸಿ ಬಿ ಬಂದು ಗುಡ್ಡ ಎಲ್ಲ ನೆಲಸಮ ಮಾಡಿ ಹತ್ತಿರದ ಗುಡ್ಡದ ಮಣ್ಣನ್ನು ಈ ಕಾಲುದಾರಿಗೆ ಹಾಕುವ ಅಂದಾಜಿತ್ತು.ಅದಾದ ಮೇಲೆ ಜಾಗ ಮಾರೀ ಅಲ್ಲಿ ಏನೋ ಹೋಟೆಲ್ ಕಟ್ಟುವವನಂತೆ.ಸ್ವಲ್ಪ ಕೆಲಸ ಆಗಿತ್ತು ಆಗಲೇ. ಏನೋ ಅವನ ಪ್ಲಾನ್ ಅವನಿಗೇ ಗೊತ್ತು. ದಿನಾಲೂ ಏನಿಲ್ಲವೆಂದರೂ ನಾಲ್ಕು ಮನೆಯ ಜನರು ಬಳಸುವ ಕಾಲುದಾರಿಯದು. ಶ್ರೀನಾಥನ ಮನೆಯವರಿಗೆ ಬೇರೆ ದಾರಿಯಿತ್ತು, ವಾಹನವೂ ಇತ್ತು. ಅವರು ಈ ದಾರಿ ಬಳಸುವ ಪ್ರಮೇಯವೇ ಬರುತ್ತಿರಲಿಲ್ಲವಾದ್ದರಿಂದ ಬೆರೆವರ ತೊಂದರೆ ಆತನಿಗೆ ಗಹನಕ್ಕೆ ಬರುತ್ತಿರಲಿಲ್ಲ. ತುಂಬಾ ಕೆಟ್ಟವನೇನು ಅಲ್ಲದಿದ್ದರೂ ಆಗಾಗ ಈ ರೀತಿ ಅಹಂಕಾರ ತೋರಿಸಿ ಜನರ ಕೆಂಪುಕಣ್ಣಿಗೆ ಗುರಿಯಾಗುತ್ತಿದ್ದ.ಹಿಂದೆಯೂ ಒಂದು ಸಲ, ಪಂಚಾಯತ್ ಪೈಪಿನ ಮೇಲೆ ತನ್ನ ಜೀಪು ಹರಿದು ನೀರು ಸರಬರಾಜು ನಿಲ್ಲಿಸಿದ್ದಲ್ಲದೆ ಕೇಳಿದವರ ಮೇಲೆ ಎರ್ರಾಬಿರಿ ನಿಂದನೆಯನ್ನೂ ಮಾಡಿದ್ದ...