ಕಿಚ್ಚನಿನ ಕಷ್ಟಗಳು



ಸಂಜೆ ಆಫೀಸಿನಿಂದ ಬರುವಾಗ ತಡವಾಗಿತ್ತು. ಔಟರ್ ರಿಂಗ್ ರೋಡು ದಾಟಿ ಬರಬೇಕಲ್ಲ, ಪ್ರಾಣ ಹೋಗುವಷ್ಟು ಸುಸ್ತಾಗಿತ್ತು. ಎದುರಿದ್ದ ಬಿಎಂಟಿಸಿ ಬಸ್ಸು ಬೇರೆ ಹೋರ್ನು ಹಾಕಿ ಇರುವ ಮೈಗ್ರೇನ್ಗೆ ತುಪ್ಪ ಸುರಿದಿತ್ತು. ಅಂತೂ ಇಂತೂ ಟ್ರಾಫಿಕ್ ಕ್ಲಿಯರ್ ಆದ ಮೇಲೆ ಮನೆಗೆ ತಲುಪುವಾಗ ಲೆಫ್ಟ್ ಇಂಡಿಕೇಟರ್ ಹಾಕಿ ರೈಟ್ ತೊಗೊಂಡ ಪುಣ್ಯಾತ್ಮ ನನ್ನ ಕಾರಿನ ಕೆಳಗೆ ಬಿದ್ದು ಅಪ್ಪಚ್ಚಿಯಾಗುವಲ್ಲಿದ್ದ . ದೇವರೇ ಕಾಪಾಡಿದರು ಅವನನ್ನ . ಅವನಿಗೆ ನಾಲ್ಕು ಬೈದು,ಕಾರ್ ಹತ್ತಿ  ಮನೆಗೆ ತಲುಪಿ ಶೂಸ್ ಬಿಚ್ಚಿ ಉಸ್ಸಪ್ಪ ಎಂದು ಕುಳಿತೆ. ನನ್ನ ಶ್ರೀಮತಿಗೆ ಇಂದು ರಜೆ. ಮಗನನ್ನು ಎತ್ತಿ ಏನೋ ತಿನ್ನಿಸುತ್ತಿದ್ದಳು. ನನ್ನ 

ತಲೆನೋವಿಗೆ ಅವಳ ಚಹಾ ರಾಮಬಾಣ. 

“ ಚಹಾ ಮಾಡ್ಕೊಡೆ, ಸಿಕ್ಕಾಪಟ್ಟೆ ತಲೆನೋಯ್ತಿದೆ “

“ ಫೈವ್’ಮಿನಿಟ್ಸ್ ರೀ , ಇವನಿಗೆ ದೋಸೆ ತಿನ್ನಿಸಿ ಬರ್ತೀನಿ  “ ತನ್ನ ಸೊಂಟವೇರಿ ಬೆರಳು ಚೀಪುತಿದ್ದ ವರುಣನ ಬಾಯಿಗೆ ದೋಸೆ ತುಂಡು ಕೊಡುತ್ತಾ ಅವಳು ಹೇಳಿದಳು. 

ನನ್ನ ತಾಳ್ಮೆ ಮೊದಲೇ ಮಿಂಚಿ ಹೋಗಿತ್ತು, ಐದು ನಿಮಿಷವಿರಲಿ ಐದು ಸೆಕುಂಡು ಕಾಯುವಷ್ಟು ಮನಸ್ಥಿತಿ ನನಗಿರಲಿಲ್ಲ. ಅಷ್ಟೇ ಅಲ್ಲ ಅವಳು ಐದು ನಿಮಿಷ ಎಂದು ಹೇಳಿದರೆ ಅರ್ಧ ಗಂಟೆ ಎಂಬುದು ಮೂರು ವರುಷದ ಸಂಸಾರದಲ್ಲಿ ನನಗೆ ಗೊತ್ತಾಗಿದೆ. ಹತ್ತು ನಿಮಿಷದಲ್ಲಿ ರೆಡಿ ಆಗ್ತೀನಿ ಆಯ್ತಾ ಎಂದು ಹೇಳುವವಳು , ಇನ್ನೂ ಸೀರೆಯೇ ಸೆಲೆಕ್ಟ್ ಮಾಡಿರಲ್ಲ ಎಂಬುದೇ ವಾಸ್ತವ. 

ಹಾಗೆಂದು ಶ್ರೀಮತಿಯ ಬಳಿ ಅದನ್ನು ಹೇಳುವ ಹಾಗಿಲ್ಲವಲ್ಲ. ಹೇಳಿದರೆ ನಿಮ್ಗೆ ತಾಳ್ಮೆನೇ ಇಲ್ಲ ಎಂದು ಗೊಣಗುತ್ತಾ ಮುಖ ಸಿಂಡರಿಸುತ್ತಾಳೆ. ಈ ಹೆಂಗಸರೇ ಹಾಗೆ. 

ಆದದ್ದಾಗಲಿ ಎಂದು ನಾನೇ ಅಡುಗೆ ಮನೆ ಹೊಕ್ಕೆ. “ ಇವತ್ತು ನಾ  ಟೀ ಮಾಡ್ತೀನಿ ” ಎಂದು ಘೋಷಿಸಿದೆ. 

ಆಹಾ ! ಅದೇನೋ ಜಗತ್ತಿನ ಎಂಟನೆಯ ಅದ್ಭುತ ಎಂಬಂತೆ ಅವಳು ನಗಲಾರಂಭಿಸಿದಳು. 

‘ ನಾನೇನೂ ನೋಡಲ್ಲಪ್ಪ, ನೀವು ಮಾಡಿ “ ಎಂದು ಹೋಗಿ  ಸೋಫಾದ ಮೇಲೆ ಕುಕ್ಕರಿಸಿದಳು. 

ನೀರು ಕಾಯಿಸಲಿಟ್ಟೆ, ಚಹಾ ಪುಡಿಯೂ ಹಾಕಿದೆ. ಬರ್ನರ್ ಸಣ್ಣ ಉರಿಯಲ್ಲಿಟ್ಟೆ. ಹಾಲು ಕೂಡಾ ಬಿಸಿ ಮಾಡಬೇಕು, ಫ್ರಿಜು ತೆಗೆದಾಗ ಹಾಲಿರಲಿಲ್ಲ.

 “ ಮಧ್ಯಾಹ್ನಕ್ಕೆ ಹಾಲು ಪಾಯಸ ಮಾಡಿದ್ದೆ,ಹಾಲು ಖಾಲಿ. ತರಕ್ಕೆ ಹೇಳಿದ್ದೆ , ಮರ್ತು ಬಿಟ್ರಲ್ಲ?” 

ಹೌದು, ಮರೆತೇ ಹೋಗಿತ್ತು ನನಗೆ. ಸ್ವಿಗ್ಗಿನೋ ಝೆಪ್ಟಾ ನೋ ಮಾಡಬೋದಿತ್ತು ,ಇರ್ಲಿ ಒಂದು ದಿನ ಬ್ಲಾಕ್ ಟೀ ಕುಡಿದ್ರೆ ಏನು ಆಗಲ್ಲ ಎಂದೆನಿಸಿತು. ಕೊತ ಕೊತ ಕುದಿಯುವ ಚಹಾ ನೋಡಿ ಖುಷಿ ಆಯಿತು.ಜಾಸ್ತಿ ಕುದಿ  ಬಂತಾ ?

 ಗ್ಯಾಸ್ ಓಫ್ ಮಾಡಿ ಸೋಸಿ ಎರಡು  ಕಪ್ಪಿನಲ್ಲಿ ಹಾಕಿ ಸೋಫಾದ ಬಳಿ ಬಂದೆ.ಸಿನಿಮಾದಲ್ಲಿ ತೋರಿಸುವಂತೆ ಕಪ್ಪನ್ನು ಅವಳಿಗೆ ಕೊಟ್ಟೆ. ಯೋಗರಾಜ್ ಭಟ್ ನೋಡಿದ್ದಿದ್ರೆ ಎರಡು ಕವಿತೆ ಬರೀತಿದ್ರು !!

 “ ಅಯ್ಯಾ … ನಂಗೇನು ಬೇಧಿ ಆಗಿಲ್ಲ ಕಹಿ ಚಹಾ ಕುಡಿಯಕ್ಕೆ .  ನೋಡಿ ಸಕ್ರೆನೆ ಹಾಕಿಲ್ಲ ನೀವು!”. ಒಂಥರಾ ಮುಖ ಮಾಡಿ ಅವಳು ಹೇಳಿದಳು. 

 ಒಹ್ ಹೌದು ,ಸರಿ, ಸಕ್ರೆ ಹಾಕಿ ವಾಪಸು ಬಂದೆ. ಆಗ ಇನ್ನೊಂದು ಕಂಪ್ಲೇಂಟು . 

“ ಕಪ್ಪು ಚಹಾ ಕುಡಿಯೋ ಬದ್ಲು, ಆ ಹಾಲಿನ ಹುಡಿ ಆದ್ರೂ  ಹಾಕ್ಬಾರ್ದಿತ್ತಾ ?”

“ ಹಾಲಿನ ಹುಡಿ ಎಲ್ಲಿದೆ ?”

“ ಅದೇ ಚಹಾ ಹುಡಿ ಡಬ್ಬದ ಪಕ್ಕನೆ ಇದ್ಯಲ್ಲ!”

“ ನಮ್ಮನೇಲಿ ಹಾಲಿನ ಹುಡಿ ಇದೆ ಅಂತ ಇವತ್ತು ಗೊತಾಯ್ತು ಕಣೇ  ನಂಗೆ!”

“ ಹೇಳಿದ್ರೆ ಒಂದು ವಾರದಲ್ಲಿ ಅಪ್ಪ ಮಗ ಮುಗಿಸ್ತಿದ್ರಲ್ಲ.ಹಸಿ ಹಾಲಿನ ಹುಡಿ ಹಂಗೆ ತಿಂದು ತಿಂದು . ಅದಕ್ಕೇ ಹೇಳಿಲ್ಲ”. 

ಸುಮ್ಮನೇ ಅವಳ ಕೈರುಚಿಯ  ಚಹಾ ಕುಡಿಬೋದಿತ್ತು ಎಂದು ಈಗ ಅನಿಸಿತು. ಹಾಲಿನ ಹುಡಿ ಇದೆ ಅಂತ ಗೊತ್ತಾಗಿ ಖುಷಿಯೂ ಆಯಿತು ನನಗೆ. 


Comments

Popular Posts