ಕನಸು

 



ಸಂಜೆ ಬರಲು ಇನ್ನೂ ಸಮಯವಿತ್ತು. ಆದರೂ ಹೊರಗೆಲ್ಲ ಕತ್ತಲಿನ ಛಾಯೆ ಏರತೊಡಗಿತ್ತು. ನನಗೆ ಮಲೆನಾಡಿನ ಮಳೆಗಾಲದ ಸಂಜೆಗಳು  ಇತ್ತೀಚೆಗೆ ಅಭ್ಯಾಸವಾಗುತ್ತಿವೆಯಷ್ಟೇ . ಶುರುವಾದರೆ ಬಿಡುವುದೇ ಇಲ್ಲ ಈ ಮಳೆ. ಸುಯ್ಯ್ ಎಂದು ಹೊಯ್ಯಲು ಶುರುವಾದ ಮಳೆಯಾ ಅಬ್ಬರ ಸೆಕೆಂಡುಗಳಲ್ಲಿ ಜಾಸ್ತಿ ಆಗಿತ್ತು. ಅಡುಗೆ ಮನೆಗೆ ಹೋಗಿ ಕರಿಬೆಲ್ಲದ ಕಾಫಿ ಮಾಡಿ, ಚಿಟ್ಟೆಯಲ್ಲಿ ಬಂದು ಕುಳಿತೆ. ನೀರಿನ ಹನಿಗಳು ಮೈಗೆ ತಟ್ಟುವುದು ಹಿತವಾಗಿತ್ತು. ಅಂಗಳದಲ್ಲಿ ಮಳೆ ಮಿಂದು ನಿಂತ ಹೂಗಳು ಮುದುಡಿ ಮೊಗ್ಗುಗಳಾಗಿದ್ದವು, ಹಟ್ಟಿಯಲ್ಲಿ ದನ ಮತ್ತು ಕಾರು ಬೆಚ್ಚಗೆ ಮಲಗಿದ್ದುವು, ದೂರದ ಬೆಟ್ಟದ ನೋಟವು ಮಂಜು ಮಂಜಾಗಿ ಕಾಣುತ್ತಿತ್ತು. ಈ ಊರಿನಲ್ಲಿ ಜನರೇ ಇಲ್ಲವೇನೋ ಎನ್ನುವಷ್ಟು ಶಾಂತವಾಗಿತ್ತು. ಗಿಜಿ ಗುಟ್ಟುವ ಸಂಜೆಯಲ್ಲಿ ಮಳೆಯ ಸದ್ದಲ್ಲದೇ ಉಳಿದ ಜೀವರಾಶಿಗಳೆಲ್ಲ ಮೌನ ತಳೆದು ನಿಂತಿದ್ದುವು. ಇಂತಹ ಸುಂದರ ಕ್ಷಣದಲ್ಲಿ ಶ್ರೀ ಸಾಮಾನ್ಯನ ಹೃದಯದಲ್ಲಿಯೂ ಕವಿತೆ ಹುಟ್ಟದೇ ಹೋದರೆ ಆಶ್ಚರ್ಯವೇ ಸರಿ!

ಕಾಫಿ ಹಾಗು ಅಡಿಕೆ ತೋಟಗಳು ಕುಣಿದು ಕುಪ್ಪಳಿಸುತ್ತಿರಬಹುದು . ಬರುವ ವರ್ಷ  ಗದ್ದೆ ಉಳುಮೆ ಮಾಡಬೇಕು, ಈ ವರ್ಷ ಆಗ್ಲಿಲ್ಲ. ಮಳೆಗಾಲದ ಕಟ್ಟಿಗೆಗಳು , ಹಟ್ಟಿಗೆ ಬೇಕಾದ ಸೊಪ್ಪು ,ಬೈಹುಲ್ಲು ಎಲ್ಲ ಗೂಡು ಸೇರಿದ ಕಾರಣ ನನಗೂ ತಲೆಬಿಸಿಯಿಲ್ಲ. ಇವತ್ತೇನಿದ್ದರೂ ಮೋಡಗಳ ಅಬ್ಬರ, ಮಿಂಚಿನ ಸಿಂಚನ ನೋಡುತ್ತಾ ಕುಳಿತುಕೊಳ್ಳುವುದಷ್ಟೇ. ಹೊರಗೆ ಇಷ್ಟೊಳ್ಳೆ ಮಳೆ ಬರುತ್ತಿರಬೇಕಾದ್ರೆ ಟಿವಿ ನೋಡೋ ಆಸೆಯೋ ಆಸಕ್ತಿಯೋ ಯಾರಿಗಿರುತ್ತದೆ?

 “ಬಟ್ಟೆ ಒಣಗಲಿಲ್ಲ ರೀ “, ಇವಳು ಒಳಗಿಂದ ಗೊಣಗುವುದು ಕೇಳುತ್ತಿದೆ. 

“ಅಟ್ಟದ ಮೇಲೆ ಹರವಿದ್ರೆ , ನಾಳೆಗೆ ಸರಿ ಆಗುತ್ತೆ “ ಉತ್ತರವೂ ಅವಳಲ್ಲೇ ಇದೆ. 

. “ ಹೀಗಾದರೆ ನಾಳೆ ಮಕ್ಲಿಗೆ ರಜೆ ಇರ್ಬೋದು , ಈ ಮಳೆಯಲ್ಲಿ ಶಾಲೆಗೇ ಹೆಂಗ್ ಹೋಗೋದು?” ಅವಳಿನ್ನೂ ಹದವಾಗಿ ಗೊಣಗುತ್ತಲೇ ಇದ್ದಾಳೆ. ಕೇಳುವುದಕ್ಕೂ ಒಂಥರಾ ಚೆನ್ನಾಗಿಯೇ ಅನಿಸುತ್ತಿದೆ.ಇನ್ನು  ರಾತ್ರಿಗೆ ಬಿಸಿ ಅನ್ನ ತುಪ್ಪ ಉಂಡು ಮಲಗಿದರೆ ನಾಳೆಯ ಚಿಂತೆ ನಾಳೆಗೆ!

ಸ್ವರ್ಗ ಅಂದ್ರೆ ಇದೇನಾ?

ಶ್ರೀನಿವಾಸನಿಗೆ ಎಚ್ಚರವಾಯಿತು. “ ರೈಲು ಈಗ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಗೆ ತಲುಪಲಿದೆ. ಬಾಗಿಲುಗಳು ಎಡಕ್ಕೆ ತೆರೆಯಲಿವೆ, ಇಳಿಯುವ ಮುನ್ನ ಅಂತರದ  ಬಗ್ಗೆ ಗಮನವಿರಲಿ.”

ತಾನು ಕಂಡ ಕನಸಿನ ಸವಿಗೆ ನಕ್ಕ ಶ್ರೀನಿವಾಸ, ಇನ್ನೊಂದು ಮೆಟ್ರೋ ಹಿಡಿಯಲು ದಡಬಡಿಸಿ ಎದ್ದ .


Comments

Popular Posts