ಕಪ್ಪೆ ಚಿಪ್ಪಿನ ಕನಸು
ಸಂಗತಿ ಅಷ್ಟಕ್ಕೇ ಮುಗಿದಿದ್ದರೆ ತೊಂದರೆ ಇರುತ್ತಿರಲಿಲ್ಲ, ಇದೀಗ ಇಲಿಯನ್ನು ಹುಲಿ ಮಾಡಿ . ಅವನದ್ದೂ, ಸ್ವಾತಿಯದ್ದು ಅಷ್ಟೇ ಏಕೆ ಪುಟ್ಟ ಆಯುಷನ ದಿನವೂ ಹಾಳಾಯ್ತು. ಆದದ್ದಾಗಲಿ ಎಂದು ಬಿಡದೆ, ಅವಳ ಅಮ್ಮನ ಬಳಿ ದೂರು ಹೇಳಿದಾಗ ಸ್ವಾತಿಗೂ ಉರಿದಿತ್ತು. ಅಷ್ಟಕ್ಕೇ ಏನಾಯ್ತು ? ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವದ ದಿನ ಬೀಚಿಗೆ ಹೋಗಿ ಬರೋಣ ಎಂದು ಪ್ರವೀಣನೇ ಹೇಳಿದ್ದ.ಪ್ರವೀಣನ ಇಷ್ಟದ ಜಾಗ ಅದು.ಮದುವೆಗೆ ಮುಂಚೆ ಎಷ್ಟೋ ಸಲ ಅಲ್ಲಿ ಹೋಗಿದ್ದುಂಟು.ಮರಳ ತಡಿಯಿಂದ ಕಪ್ಪೆ ಚಿಪ್ಪು ಸಂಗ್ರಹಿಸಿ ಅವಳಿಗೆ ಗ್ರೀಟಿಂಗ್ ಕಾರ್ಡ್ ಕೊಟ್ಟ ಮೇಲೆಯೇ ಅವಳು ಅವನನ್ನು ಇಷ್ಟ ಪಡಲು ಪ್ರಾರಂಭಿಸಿದ್ದು!.ಅಂದು ಅವರು ಅಲೆಗಳ ಜೊತೆ ತೆಗೆದ ಸೆಲ್ಫಿ ಇಂದು ಅವರ ಮಲಗುವ ಕೋಣೆಯ ಮಂಚದ ಬಳಿಯಲ್ಲಿ ಭದ್ರವಾಗಿ ಕುಳಿತಿತ್ತು.ವಾರಕ್ಕೊಮ್ಮೆ ಅದನ್ನು ಒರಸದಿದ್ದರೆ ಯಾಕೋ ಅವಳಿಗೆ ನಿದ್ದೆ ಬರುವುದಿಲ್ಲವಂತೆ!.
ಈಗ ಕೆಲಸದ ತಾಪತ್ರಯ ಮುಗಿಸಿ ಹೊರಗೆ ಹೋಗುವುದೇ ದೊಡ್ಡ ಮಾತು , ಅದರಲ್ಲಿ ಅವನೇ ಬೇಗ ಬರ್ತೇನೆ ಬೀಚ್ ಹೋಗುವ ಎಂದದ್ದು, ಅವಳ ತುಟಿಗೆ ಸಕ್ಕರೆಯಂತೆ ತಾಗಿತ್ತು. ವರ್ಕ್ ಫ್ರಮ್ ಹೋಮ್ ಇದ್ದ ಕಾರಣ ಸ್ವಾತಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಳು. ಬೇಗ ಮೀಟಿಂಗು ಮುಗಿಸಿ, ಆಯುಷನ್ನು ಎಬ್ಬಿಸಿ ಅವನಿಗೆ ಅಜ್ಜ ಕೊಡಿಸಿದ್ದ ಕೆಂಪು ಶರ್ಟು ಹಳದಿ ಪ್ಯಾಂಟು ಹಾಕಿಸಿ, ಟಪಟಪನೆ ಎಣ್ಣೆ ಇಟ್ಟು ಕೂದಲು ಬಾಚಿಯಾಗಿತ್ತು. ಪ್ರವೀಣನಿಗೂ ಇದೆ ರೀತಿ ಮಾಡುತ್ತಿದ್ದೆ ಅಲ್ವ? ಮಗನನ್ನ ಬಾಚಿ ತಬ್ಬಿದವಳು ಹಾಗೆ ನಕ್ಕಳು. ತಾನು ವಿಶೇಷವಾಗಿ ತಯಾರಾಗಲು ಅವಳು ಮರೆತಿರಲಿಲ್ಲ. ಗಂಧದ ಬಣ್ಣದ ಸೀರೆ, ಅದಕ್ಕೊಪ್ಪುವ ರವಿಕೆ- ಬಿಂದಿಗಳು , ಹೂವ ದಂಡೆಯು ಅವಳ ಕೂದಲಲ್ಲಿತ್ತು.ಘಮ ಸೂಸುವ ಸೆಂಟು ಪೂಸಿ ದಾರಿ ನೋಡುತ್ತಾ ಕುಳಿತಳು ಸ್ವಾತಿ. ಆದರೆ ಹೇಳಿದ ಪ್ರವೀಣನೇ ಗಂಟೆ ಐದೂ ವರೆ ಆದರೂ ಕಾಣಲಿಲ್ಲ,ಕರೆ ಮಾಡಿದಾಗ ತೆಗೆಯಲೂ ಇಲ್ಲ.ಕೊಟ್ಟ ಮಾತಿಗೆ ಅವನೇ ತಪ್ಪಿದ್ದ. ಅಂದು ಅವನು ಮನೆಗೆ ಬಂದಾಗ ಗಂಟೆ ಏಳು, ಸ್ವಾತಿ ಕಣ್ಣು ಕೆಂಪು ಮಾಡಿ ಕುಳಿತಿದ್ದಳು. ಆಯುಷ್ ಅದೇ ಬಟ್ಟೆಯಲ್ಲಿ ಮಲಗಿದ್ದ. ಪ್ರವೀಣನಿಗೆ ಮೈ ಸಣ್ಣಗೆ ನಡುಗಿತು.
“ ಮೀಟಿಂಗ್ ಇತ್ತು ಮಾರಾಯ್ತಿ , ಸಾರಿ. ಶನಿವಾರ ಕರ್ಕೊಂಡು ಹೋಗ್ತೇನೆ ಕೋಪ ಮಾಡ್ಬೇಡ..” ಅವಳ ಕೂದಲನ್ನು ನೇವರಿಸುತ್ತಾ ಪ್ರವೀಣ ರಮಿಸಿದ.
“ ಎಷ್ಟು ಸಲ ಹೀಗೆ ಮಾಡ್ತೀರೀ? ಇದು ಮೂರನೇ ಸಲ. ಫೋನು ಸಹ ಮಾಡ್ಲಿಲ್ಲ ನೀವು , ನಾನಿಲ್ಲಿ ಕಾಯ್ತಾ ಇದ್ದೆ.. “ ಮಾತು ಮುಗಿಯುವ ಮುನ್ನವೇ ಅವಳ ಗಂಟಲು ಕಟ್ಟಿತ್ತು. “ನೀವೇ ಬೇಕು ಎಂದು ಮದ್ವೆ ಆದೆ, ಎಲ್ಲಾ ನನ್ನ ಹಣೆಬರಹ , ಐ ಕಾಂಟ್ ಡೂ ದಿಸ್ ಎನಿ ಮೋರ್ !” ಅವಳ ಸದ್ದಿಗೆ ಎಚ್ಚೆತ್ತ ಮಗು ಮಗ್ಗುಲು ಬದಲಿಸಿ ಪುನಃ ಮಲಗಿತು. ಪ್ರವೀಣನಿಗೆ ರೇಗಿ ಹೋಯಿತು.
“ ಅಲ್ಲಾ ನಾನೇನ್ ಬೇಕು ಅಂತ ಹೀಗೆ ಮಾಡ್ತೇನಾ ? ಮೆನೇಜರ್ ಮಂತ್ ಎಂಡ್ ಅಂತ ಎಲ್ಲ ಅಕೌಂಟ್ಸ್ ಮುಗಿಸು ಅಂತ ತಲೆ ಮೇಲೆ ಕೂತಿದ್ರೆ ನಾನೇನು ಮಾಡ್ಲಿ? ಇಲ್ಲಿ ಸಹ ನಂಗೆ ನೆಮ್ಮದಿ ಇಲ್ವ? ಸುಸ್ತಾಗಿ ಬಂದಿದ್ದೇನೆ , ಇಲ್ಲೂ ಇದೆಲ್ಲ ಕೇಳ್ತಾ ಇರ್ಬೇಕಾ ಸ್ವಾತಿ ನಾನು ??”
ಸ್ವಾತಿ ಸುಮ್ಮನಿರಲು ಅವಳು ಮೇಣದ ಬೊಂಬೆಯೇನಲ್ಲವಲ್ಲ,”ಆಯಿತು ಪ್ರವೀ , ನನ್ನದೇ ತಪ್ಪು,ಅನಿವರ್ಸರಿ ಅಂತ ಖುಷಿ ಪಡೋದು ಬಿಟ್ಟು ನನ್ನ ಅಳಿಸ್ತಾ ಇದ್ದೀರಲ್ಲ,?
ನಿಮ್ಗೆ ನನ್ನಿಂದ ಸುಖ ಇಲ್ಲ ಬಿಡಿ. ನೀವಾಯ್ತು ನಿಮ್ ಕೆಲಸ ಆಯ್ತು!,ಒಂದು ಹೇಳಿ ನಂಗೆ, ನಿಮ್ ಆಫೀಸಲ್ಲಿ ಯಾರಾದ್ರೂ ನಿಮ್ಗೆ ಇಷ್ಟ ಇರುವವರು ? ಹೀಗೆ ಲೇಟ್ ಆಗಿ ಬರ್ತೀರಲ್ಲ?” . ಬಟ್ಟೆಯೂ ಬದಲಿಸದೆ ಕುಳಿತಿದ್ದ ಪ್ರವೀಣನ ಕೋಪ ಅಟ್ಟಕೇರಿತ್ತು. ಹಸಿವಿನಿಂದ ಸೋತು ಕುಗ್ಗಿ ಹೋದವನಿಗೆ ಸ್ವಾತಿಯ ಮಾತುಗಳು ಬಾಣದಂತೆ ಚುಚ್ಚುತ್ತಿದ್ದವು.
ಸ್ವಾತಿಯನ್ನು ಹಿಡಿದು ನಿಲ್ಲಿಸಲು ಅವರ ಅಮ್ಮನೇ ಬೇಕು, ಅವರಿಗೆ ಫೋನು ಮಾಡಿದ. ವಿಷಯವನ್ನು ಹೇಳಿದಾಗ ಆಕೆ ಕೆಂಡಾಮಂಡಲವಾಗಿ ಸ್ವಾತಿಯನ್ನೇ ಬೈದುಬಿಟ್ಟರು. ಅವಮಾನದಿಂದ ಕುಪಿತಗೊಂಡ ಸ್ವಾತಿ ಕರೆ ಕಟ್ ಮಾಡಿ, ಮಗನ ಬಳಿಯಲಿ ಹೋಗಿ ಬಿದ್ದು ಮೆಲ್ಲಗೆ ಅಳತೊಡಗಿದಳು. ಪ್ರವೀಣನಿಗೆ ಕೂಡ ಕೆಟ್ಟದೆನಿಸಿತು, ಹೋಗಿ ಅವಳನ್ನು ತಬ್ಬಿದಾಗ ದೂರ ಸರಿದಳು ಸ್ವಾತಿ. ಅಬ್ಬಾ! ಅಮ್ಮನ ಕೋಪ ಅವಳಿಗೂ ಬಂದಿದೆ!. ಸೊಂಟ ತಿವಿದರೂ ಸುದ್ದಿಯಿಲ್ಲ. ಇರಲಿ , ಎಂದು ಆತನೂ ಬೋರಲಾಗಿ ಬಿದ್ದುಕೊಂಡ. ಅಂದು ಆಯುಷನ್ನು ಬಿಟ್ಟರೆ ಆ ಮನೆಯಲ್ಲಿ ಯಾರ ಕಣ್ಣಿಗೂ ನಿದ್ದೆ ಹತ್ತಲಿಲ್ಲ.
ದಿನ ಬೆಳಗಾಯಿತು, ಐದೂವರೆಗೆ ಇಬ್ಬರೂ ಎದ್ದು ಬಿಟ್ಟರು. ಇವತ್ತು ವಾಕಿಂಗ್ ಇಲ್ಲ, ಬಿಸಿ ಚಹಾ ಒಟ್ಟಿಗೆ ಹೀರುವ ಕೆಲಸವೂ ಇಲ್ಲ. ಅನ್ನದ ಕುಕರ್ ಕೂಗಿತು. ಮಧ್ಯಾಹ್ನಕ್ಕೆ ಪಲಾವು ಬೆಳಗ್ಗೆಗೆ ದೋಸೆ ಎಲ್ಲವೂ ಸದ್ದಿಲ್ಲದೇ ಆಗಿತ್ತು.ಯಾರೂ ಯಾರ ಹತ್ರ ಮಾತಾಡಲಿಲ್ಲ, ಆಯುಷನ ಒಟ್ಟಿಗೆ ಅಪ್ಪ ಆತ ಆಡಲಿಲ್ಲ, ಅಮ್ಮ ಎಂದಿನಂತೆ ಚಿತ್ರ ಮಾಡಿಸಲಿಲ್ಲ. ಹಠ ಮಾಡಿದ್ದರೂ ಅಮ್ಮ ಇವತ್ತು ಬೈಯಲಿಲ್ಲ,ಅಂಗಳದಲ್ಲಿ ರಂಗೋಲಿಯು ಹಚ್ಚಿರಲಿಲ್ಲ. ಇವತ್ತು ತುಂಬಾ ಬೋರು ಆಯುಷನಿಗೆ. ಅವನಪ್ಪ ಅಮ್ಮನ ಎದೆಯ ಬೇಗೆ ಅವನಿಗೆ ಅರ್ಥವಾಗುತ್ತಿದ್ದರೆ ಬಹುಷಃ ಏನಾದರೂ ಮಾಡುತ್ತಿದ್ದನೋ ಏನೋ!ಅಂದು ಶುಕ್ರವಾರ ಆಗಿದ್ದ ಕಾರಣ ಸ್ವಾತಿಯ ಕೆಲಸ ಬೇಗನೆ ಆಗಿತ್ತು. ನಿದ್ದೆ ಸರಿ ಅಗಲಿಲ್ಲವಾದ ಕಾರಣ ಅವಳು ಹಾಸಿಗೆಯ ಮೇಲೆ ಮೈ ಚೆಲ್ಲಿದ್ದಳು. ಪುಟ್ಟನೂ ಬಂದು ಅಮ್ಮನ ಹೊಟ್ಟೆ ಮೇಲೆ ಮಲಗಿದ, ಅಮ್ಮಂಗೆ ಕಚಗುಳಿ ಮಾಡಿದರೂ ಅವಳಿಂದು ನಗುತ್ತಿಲ್ಲ. ಅವನಿಗೊಂದೂ ಅರ್ಥ ಆಗುತ್ತಿಲ್ಲ. ನಿದ್ದೆಯ ಮಂಪರಲ್ಲಿದ್ದಾಗ ಪ್ರವೀಣ ಬಂದಿದ್ದ. ಇವತ್ತು ಬೇಗನೆ ಬಂದಿದ್ದ, ಬರಿಗೈಯಲ್ಲಿ ಅಲ್ಲ. ಸ್ವಾತಿಗೆ ಇಷ್ಟದ ಮಲ್ಲಿಗೆ ಹೂವು ತಂದಿದ್ದ. ಸ್ವಾತಿಯ ಮುಖವೂ ಪ್ರವೀಣ ಬಂದ ಮೇಲೆ ಗಂಟಿಕ್ಕಿರಲಿಲ್ಲ. ಶೀತಲ ಸಮರದಂತೆ , ಅಷ್ಟೇ. “ ಬೀಚಿಗೆ ಹೋಗುದಾಂತ ?” ಅವನೇ ಕೇಳಿದ್ದ, “ ಅವನಿಗೆ ಬಟ್ಟೆ ಹಾಕಿಸಿ ,ನಾನು ರೆಡಿ ಆಗಿ ಬರ್ತೇನೆ ” ಸ್ವಾತಿ ಹೇಳಿಡಲು. ಕೋಪ ಯಾರಿಗೆ ಈಗ?
ಮಲ್ಪೆ ಬೀಚು ಹಿತವಾಗಿತ್ತು. ಆಗಷ್ಟೇ ಬಿಸಿಲು ಇಳಿದು ತಂಪಾದ ಕಡಲಗಾಳಿ ಬಂದು ತಬ್ಬುತ್ತಿತ್ತು.. ಪುಟ್ಟ ಆಯುಷ್ ಅಮ್ಮನ ಮಡಿಲಲ್ಲಿ ಕುಳಿತು ಅಲೆಗಳನ್ನು ನೋಡುತ್ತಿದ್ದ. ನೊರೆ ನೊರೆಯಾಗಿ ಬಂಡೆಯನ್ನು ಬಡಿಯುತ್ತಿದ್ದ ಅಲೆಗಳು ಅವನ ಕಣ್ಣಿಗೆ ಆಕರ್ಷಕವಾಗಿ ಕಾಣುತ್ತಿತ್ತು.ಕೈಯಲ್ಲಿ ಮರಳು ಹಿಡಿಯಲು ಬಾಗುತ್ತಿದ್ದ ಪುಟ್ಟ ಆಯುಷ. ನೊರೆಗಡಲ ಅಲೆಗಳೊಂದಿಗೆ ಕಪ್ಪೆ ಚಿಪ್ಪುಗಳು ಬಂದು ದಡದಲ್ಲಿ ಬೀಳುತ್ತಿತ್ತು.ಪ್ರವೀಣನ ಹೆಗಲ ಮೇಲೆ ಸ್ವಾತಿ ತಲೆಯಾನಿಸಿದ್ದಳು. ಮಂಚದ ಮೇಜಿನಲ್ಲಿ ಬೆಚ್ಚಗೆ ಕುಳಿತಿದ್ದ ಪಟದ ನೆನಪಾಯಿತೋ ಏನೋ ಪ್ರವೀಣನೂ ಅವಳನ್ನು ಗಟ್ಟಿಯಾಗಿ ಹಿಡಿದಿದ್ದ.ನಿನ್ನೆ ಜಗಳ ಮಾಡಿದ್ದು ಯಾರು ಅಂತ ಕೇಳುವವರಿಗೆ ನಾಚಿಕೆಯಾಗಬೇಕು! ಅಲೆಗಳ ಬಳಿಗೋಡಿದ ಪುಟ್ಟನ ಪುಟ್ಟ ಹೆಜ್ಜೆಗಳಿಗೆ ಅವರು ವರುಷಗಳ ಹಿಂದೆ ಕಂಡ ಕನಸಿನದ್ದೇ ಚಿತ್ತಾರವಿತ್ತು!
Comments
Post a Comment