ಮಾಡಿದ್ದುಣ್ಣೋ... !
“ ನೀವು ಹೀಗೆ ಹೇಳಿದರೆ ನಾವು ನಾಳೆ ನಡೆಯುವುದು ಬೇಡವೇ ? ನಮ್ಮ ಮಕ್ಕಳು ಇಲ್ಲೇ ಶಾಲೆಗೇ ಹೋಗ್ತಾವೆ, ಅವು ಏನ್ ಮಾಡ್ಯಾವು” ಕುಸುಮನ ಗಂಡ ಶಶಿ ಹತ್ತಿರದ ಮನೆಯ ಶ್ರೀನಾಥನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ.ಶ್ರೀನಾಥನ ಮನೆಯ ಬದಿಯಿಂದ ಹೋಗುವ ಕಾಂಕ್ರೀಟು ಮಾರ್ಗಕ್ಕೆ ಸೇರುವ ಕಾಲುದಾರಿಯನ್ನು ಜೆಸಿಬಿ ತರಿಸಿ ಮುಚ್ಚುವ ಪ್ಲಾನ್(ಶ್ರೀನಾಥನ ಪ್ಲಾನ್) ಮಾಡಿ ತಿಂಗಳುಗಳಾಗಿದ್ದುವು.ಆದರೆ ಏನೋ ಅಡಚಣೆಗಳಿಂದ ಕೆಲಸ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ಬರುವ ವಾರ ಜೆ ಸಿ ಬಿ ಬಂದು ಗುಡ್ಡ ಎಲ್ಲ ನೆಲಸಮ ಮಾಡಿ ಹತ್ತಿರದ ಗುಡ್ಡದ ಮಣ್ಣನ್ನು ಈ ಕಾಲುದಾರಿಗೆ ಹಾಕುವ ಅಂದಾಜಿತ್ತು.ಅದಾದ ಮೇಲೆ ಜಾಗ ಮಾರೀ ಅಲ್ಲಿ ಏನೋ ಹೋಟೆಲ್ ಕಟ್ಟುವವನಂತೆ.ಸ್ವಲ್ಪ ಕೆಲಸ ಆಗಿತ್ತು ಆಗಲೇ. ಏನೋ ಅವನ ಪ್ಲಾನ್ ಅವನಿಗೇ ಗೊತ್ತು. ದಿನಾಲೂ ಏನಿಲ್ಲವೆಂದರೂ ನಾಲ್ಕು ಮನೆಯ ಜನರು ಬಳಸುವ ಕಾಲುದಾರಿಯದು. ಶ್ರೀನಾಥನ ಮನೆಯವರಿಗೆ ಬೇರೆ ದಾರಿಯಿತ್ತು, ವಾಹನವೂ ಇತ್ತು. ಅವರು ಈ ದಾರಿ ಬಳಸುವ ಪ್ರಮೇಯವೇ ಬರುತ್ತಿರಲಿಲ್ಲವಾದ್ದರಿಂದ ಬೆರೆವರ ತೊಂದರೆ ಆತನಿಗೆ ಗಹನಕ್ಕೆ ಬರುತ್ತಿರಲಿಲ್ಲ. ತುಂಬಾ ಕೆಟ್ಟವನೇನು ಅಲ್ಲದಿದ್ದರೂ ಆಗಾಗ ಈ ರೀತಿ ಅಹಂಕಾರ ತೋರಿಸಿ ಜನರ ಕೆಂಪುಕಣ್ಣಿಗೆ ಗುರಿಯಾಗುತ್ತಿದ್ದ.ಹಿಂದೆಯೂ ಒಂದು ಸಲ, ಪಂಚಾಯತ್ ಪೈಪಿನ ಮೇಲೆ ತನ್ನ ಜೀಪು ಹರಿದು ನೀರು ಸರಬರಾಜು ನಿಲ್ಲಿಸಿದ್ದಲ್ಲದೆ ಕೇಳಿದವರ ಮೇಲೆ ಎರ್ರಾಬಿರಿ ನಿಂದನೆಯನ್ನೂ ಮಾಡಿದ್ದ. ಅದೇನೋ ತನ್ನ ಮಣ್ಣಿನ ಮೇಲೂ ಮಣ್ಣಿನ ಅಡಿಯಲ್ಲೂ ಬೇರೆ ವಸ್ತು ಹೋಗಬಾರದೆಂಬ ಮನೋಭಾವ. ಶಶಿಯು ಶ್ರೀನಾಥನನು ಬೈಯ್ಯತೊಡಗಿದಾಗ ಶ್ರೀನಾಥನು ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದ.ಅವನ ಹೊಸ ಮೂರಂತಸ್ತಿನ ಮನೆಯ ಗೃಹಪ್ರವೇಶವು ಮುಂದಿನ ತಿಂಗಳು ನಡೆಯಲಿದ್ದ ಕಾರಣ ಆತ ಕೈಗೆ ಸಿಗುತ್ತಿರಲಿಲ್ಲ. ಬೆಳಗ್ಗೆ ಹೋದರಷ್ಟೇ ಅವನ ಹತ್ರ ಮಾತಾಡಬಹುದೆಂದು ಶಶಿಗೆ ಗೊತ್ತಿತ್ತು.
“ ನಾವು ಹೋದ ಸಲವೇ ಹೇಳಿದ್ದೆವಲ್ವಾ? ನಾವು ಪಂಚಾಯತ್ ಪ್ರೆಸಿಡೆಂಟ್ ಹತ್ರ ಹೋಗಿ ದೂರು ಕೊಡಬೇಕಾದೀತು.ಮತ್ತೆ ಅದು ಇದು ಅಂತ ಜಗಳಕ್ಕೆ ಬರ್ಬೇಡಿ “ ಶಶಿ ಸ್ವಲ್ಪ ಖಾರವಾಗಿಯೇ ಹೇಳಿದರೂ ಈ ಮನುಷ್ಯ ಕುಳಿತಲ್ಲಿಂದ ಏಳಲಿಲ್ಲ.
“ ನೋಡಪ್ಪ ನೀವು ಎಂತ ಬೇಕಾದರೂ ಮಾಡಿ, ನೀವು ಗ್ರಾಮ ಪಂಚಾಯತಿಗೆ ಹೋದ್ರೆ ನಾನು ಕೊರ್ಪೊರೇಷನ್ ಹೋಗ್ತೇನೆ. ನನ್ನ ಮನೆಯ ದಾರಿ ಮುಚ್ಛ್ಬೇಕು ಅಂತ ನನ್ನ ತೀರ್ಮಾನ, ನಿಮಗೋಸ್ಕರ ಅಂತ ನನ್ನಪ್ಪ ಮಾಡಿದ್ದ ಸೊತ್ತು ಅಲ್ಲ ಇದು.” ಶ್ರೀನಾಥನ ಉತ್ತರ. ಇವನ ಬಳಿ ಮಾತಾಡಿ ಪ್ರಯೋಜನ ಇಲ್ಲವೆಂದು ಶಶಿ ಜಾಗ ಖಾಲಿ ಮಾಡಿದ. ಕುಸುಮ ಕಾಂಪೌಂಡ್ ನಿಂದ ಇಣುಕಿ ನೋಡುತ್ತಿದ್ದವಳು ಶಶಿಯ ಮುಖ ನೋಡಿ ತೆಪ್ಪಗಾದಳು.
“ ಏನು ಪ್ರಯೋಜನ ಇಲ್ಲ. ಅವನಷ್ಟು ಯೂಸ್ಲೆಸ್ ಯಾರೂ ಇಲ್ಲ. ಇನ್ನು ದಿನಾ ಬೆಳಗ್ಗೆ ದೊಡ್ಡ ರೋಡಿಂದ ಮಕ್ಳನ್ನು ಸ್ಕೂಲ್ ಬಸ್ಸಿಗೆ ಬಿಟ್ಟು ಬರ್ಬೇಕು. “ ಶಶಿಬಂದು ಹೇಳಿದ.ದೊಡ್ಡ ರೋಡಿಂದ ಹೋದರೆ ಏನಿಲ್ಲಾಂದ್ರೂ ಮುಕ್ಕಾಲು ಕಿ.ಮೀ ನಡೆಯಬೇಕು, ಮಕ್ಕಳನ್ನು ಆ ದಾರಿಯಲ್ಲಿ ನಡೆಸಬೇಕೆಂದರೆ ಅರ್ಧ ಮುಕ್ಕಾಲು ಗಂಟೆ ಬೇಕೇ ಬೇಕು. ಬೆಳಗ್ಗೆದ್ದು ಮಕ್ಕಳಿಗೆ ತಿಂಡಿ ಬಾಕ್ಸು ಮಾಡುವಷ್ಟರಲ್ಲಿ ಕುಸುಮ ಬಾಡಿದ ಬದನೆಯಾಗುತ್ತಾಳೆ, ಇದರಲ್ಲಿ ಸ್ಕೂಲ್ ಬಸ್ಸಿಗೂ ಬಿಡಬೇಕು ಎಂದ್ರೆ ಅವಳೇನು ಮಾಡಬೇಕು ಪಾಪ?.ಶಶಿಗೆ ಬೆಳಗ್ಗೆ ಸೆಂಟರಿಂಗ್ ಕೆಲಸಕ್ಕೆ ಹೋಗಬೇಕು. ಅವರೂ ಕೈಗೆ ಸಿಗುವುದಿಲ್ಲ. ಯೋಚನೇ ತಲೆಗಿಟ್ಟುಕೊಂಡಿತು. ಸೀದು ಹೋಗ್ತ್ತಿದ್ದ ಪಲ್ಯದ ನೆನಪಾಗಿ ಅಡುಗೆ ಕೋಣೆಗೆ ಓಡಿದಳು ಕುಸುಮ.
“ ನಾಳೆಯಿಂದ ದೊಡ್ಡ ರೋಡಿನ ವಾಸುವಿನ ಅಂಗಡಿ ಹತ್ರ ಮಕ್ಳು ಹತ್ತುತ್ತಾರೆ. ಡ್ರೈವರಿಗೆ ಸ್ವಲ್ಪ ಹೇಳಿ” ಎಂದು ಮಕ್ಕಳ ಬಸ್ ಗ್ರೂಪಿನಲ್ಲಿ ಶಶಿ ಮೆಸೇಜು ಹಾಕಿದ. ಕುಸುಮ ಬೆಳಗ್ಗೆ ಐದಕ್ಕೆ ಅಲಾರಾಂ ಇಟ್ಟುಮಕ್ಕಳನ್ನು ಬೇಗ ಮಲಗಿಸಿ ಒಂಭತ್ತು ಕಾಲಕ್ಕೆ ಅವಳೂ ಮಲಗಿ ಬಿಟ್ಟಳು.ನಾಳೆಗೆ ಉಪಿಟ್ಟು ಮತ್ತು ಬಾಕ್ಸ್ ಗೆ ಚಿತ್ರಾನ್ನ, ಮನಸ್ಸಿನಲ್ಲೇ ಲೆಕ್ಕ ಹಾಕಿ ನಿದ್ರೆ ಬಂದದ್ದೇ ಗೊತ್ತಾಗಲಿಲ್ಲ.
ಬೆಳಗ್ಗೆದು ಮಕ್ಕಳನ್ನು ಹೊರಡಿಸಿ ಬಸ್ಸಿಗೆ ಬಿಟ್ಟು ಬಂದು ಕನ್ನಡಿಯ ಎದುರು ನಿಂತಾಗಲೇ ಅವಳಿಗೆ ದಣಿವಿನ ಅರಿವು ಆಗಿದ್ದು. ಕೆದರಿದ ಕೂದಲು ರವೇ ಅಂಟಿದ್ದ ನೈಟಿ ಅದರ ಮೇಲೊಂದು ಹಳೆ ದುಪಟ್ಟಾ,ಬೋಳು ಹಣೆ ಇದೆಲ್ಲ ಇಟ್ಟುಕೊಂಡು ಮೇಯ್ನ್ ರೋಡಿಗೆ ಹೋದ ತನ್ನ ಮೇಲೆ ಅವಳಿಗೆ ಅಸಹ್ಯವಾಯಿತು. ಛೇ, ನಾಳೆಯಿಂದ ಸ್ವಲ್ಪ ರೆಡಿಯಾಗಿ ಹೋಗಬೇಕು. ಇವರು ಹೇಳಿದಾಗ ಸ್ಕೂಟಿ ಕಲಿತಿರುತ್ತಿದ್ದರೆ ಮಕ್ಕಳನ್ನು ಹಾಯಾಗಿ ಬಿಡಬಹುದಿತ್ತು, ಈಗ ಸ್ಕೂಟಿ ಇವರ ಅಣ್ಣನ ಮನೆಯಲ್ಲಿದೆ. ಛೇ!.
ಆ ದಿನವೂ ಕುಸುಮ ಬೇಗನೆ ಮಲಗಿದಳು. ಒಂದೇ ದಿನಕ್ಕೆ ಅವಳಿಗೆ ಸಾಕಾಗಿತ್ತು. ಈ ಮಕ್ಕಳು ಯಾವಾಗ ಬೆಳೆದು ದೊಡ್ಡದಾಗುತ್ತಾರೋ ಎಂದು ಯೋಚಿಸಿದಳು.
ಅಂದು ಮಂಗಳವಾರ. ಬೆಳಗ್ಗೆದ್ದು ಫೋನು ತೆಗೆದಾಗ ಲೋಕಲ್ ವಾಟ್ಸಪ್ಪ್ ಗ್ರೂಪುಗಳಲ್ಲಿ ಗುಡ್ಡ ಜರಿತದ ಸುದ್ದಿಯೇ ಹರಿಯುತ್ತಿತ್ತು.”ಸಣ್ಣಹಳ್ಳಿಯ ಪಕ್ಕದ ಗುಡ್ಡ ಜರಿತ, ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತ” ಎಂಬ ಶೀರ್ಷಿಕೆ ನೋಡಿದವಳೇ ಗಂಡನಿಗೆ ಕರೆದು ತೋರಿಸಿದಳು. ಓದಿದಾಗ ಅರ್ಥವಾಯಿತು. ಶ್ರೀನಾಥನ “ಗುಡ್ಡ” ಕುಸಿದು ಬಿದ್ದು ಅವನ “ಹೋಟೆಲ್” ಕುಸಿದು ಬಿದ್ದಿತ್ತು. ಜೀವ ಹಾನಿಯೇನು ಇರಲಿಲ್ಲ ಆದರೆ ಗುಡ್ಡವು ಹೋಟೆಲಿನ ಹತ್ತಿರ ಸಣ್ಣ ಕಂದಕವನ್ನು ಸೃಷ್ಟಿ ಮಾಡಿತ್ತು. ಆಶ್ಚರ್ಯವೆಂದರೆ ಸಣ್ಣ ಕಾಲುದಾರಿ
ಗೆ ಯಾವ ರೀತಿಯ ತೊಂದರೆಯೂ ಆಗಿರಲಿಲ್ಲ. ಅದನ್ನು ಮುಚ್ಚುವ ಆಸೆಗೂ ಮಣ್ಣು ಬಿದ್ದಿತ್ತು. ಶಶಿಗೆ ಆಶ್ಚರ್ಯ! ಯಾವ ಮಳೆಯೂ ಗಾಳಿಯೊ ಇಲ್ಲದಿದ್ದರೂ ಗುಡ್ಡ ಜರಿತವಾಯಿತಲ್ಲ. ಏನೇ ಆಗಲಿ ಆ ಶ್ರೀನಾಥನ ಅತಿಯಾಸೆ ಇನ್ನಾದರೂ ಕಮ್ಮಿ ಆದೀತೆಂದುಕೊಂಡ.
“ ಇವತ್ತು ಶಾಲೆ ಬೇಡ ಮಕ್ಲಾ,ಗುಡ್ಡ ಬಿದ್ದಿದೆ. ಹೋಗುದು ಅಷ್ಟು ಸೇಫ್ ಅಲ್ಲ” ಎಂದು ಕುಸುಮ ಮಕ್ಕಳಿಗೆ ಹೇಳಿದ್ಲು.”ನೀವೂ ಕೆಲಸಕ್ಕೆ ಹೋಗ್ಬೇಡಿ, ಒಂದು ದಿನ ಅಲ್ವ ಏನಾಗುದಿಲ್ಲ “ ಅವಳ ಪ್ರೀತಿಯ ಮಾತುಗಳಿಗೆ ಬಗ್ಗದಿರುವುದು ಹೇಗೆ? ಶಶಿಯೂ ಹೋಗಲಿಲ್ಲ.
“ನಾಳೆಯಿಂದ ಪುನಃ ಕಾಲುದಾರಿಯಲ್ಲಿಯೇ ಶಾಲೆಗೇ ಹೋಗುದು, ನಿಂಗೆ ಆರು ಗಂಟೆವರೆಗೆ ಮಲಗಬೋದು “ ಶಶಿ ಹೆಂಡತಿಯನ್ನು ರೇಗಿಸಿ ಗೊಳ್ಳೆಂದು ನಕ್ಕ.
“ಇಲ್ಲ ಇಲ್ಲ, ನೀವು ನನಗೆ ಸ್ಕೂಟಿ ಕಲಿಸಿ, ನಾನೇ ಮಕ್ಕಳನ್ನು ಸ್ಕೂಟಿಯಲ್ಲಿ ಬಿಟ್ಟು ಬರ್ತೇನೆ ನಾಳೆಯಿಂದ” ಎಂದು ಹೆಮ್ಮೆಯಿಂದ ಕುಸುಮ ಹೇಳಿದಾಗ ಶಶಿ ಇನ್ನುಜೋರಾಗಿ ನಕ್ಕಿದ್ದು ನೀವು ನೋಡಬೇಕಿತ್ತು!

Comments
Post a Comment